ಭೀಮಸೇನ ಜೋಶಿ
(1922- ). ಸಮಕಾಲೀನ ಹಿಂದುಸ್ತಾನೀ ಸಂಗೀತಗಾರರಲ್ಲಿ  ಪಂ. ಭೀಮಸೇನ ಜೋಶಿಯವರನ್ನು ಅತ್ಯಂತ ಶ್ರೇಷ್ಠ ಗಾಯಕರೆಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಖ್ಯಾತಿವೆತ್ತ ಮಹಾನ್ ಕಲಾವಿದರಲ್ಲಿ ಅವರೂ ಒಬ್ಬರು. 
ಪಂ. ಭೀಮಸೇನ ಜೋಶಿಯವರು ಹುಟ್ಟಿದ್ದು ಫೆಬ್ರುವರಿ 14, 1922 ರಂದು ತಮ್ಮ ದೊಡ್ಡಮ್ಮನ ಮನೆಯಲ್ಲಿ, ರೋಣದಲ್ಲಿ. ಅವರದು ಮೂಲತಃ ಡಂಬಳದ ಜೋಶಿ ಮನೆತನ. ತಂದೆ ಗುರುರಾಜಾಚಾರ್ಯರು ಕನ್ನಡ, ಸಂಸ್ಕøತ, ಇಂಗ್ಲೀಷ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದವರು. ತಾಯಿ ಗೋದಾವರಿಬಾಯಿ ಕಲಿತವರಲ್ಲವಾದರೂ, ಪರಂಪರಾಗತವಾಗಿ ಕಲಿತುಕೊಂಡ ದಾಸರ ಪದಗಳನ್ನು ಹಾಡುವರು. ಅಜ್ಜ ಭೀಮಾಚಾರ್ಯರು ಆ ಕಾಲದ ಸುಪ್ರಸಿದ್ಧ ಕೀರ್ತನಕಾರರು. ಚಿಕ್ಕಪ್ಪ ಗೋವಿಂದಾಚಾರ್ಯರು (ಜಡಭರತ) ಕನ್ನಡದ ಪ್ರಖ್ಯಾತ ನಾಟಕಕಾರರು. ಇಂಥ ಪರಿಸರದಲ್ಲಿ ಹುಟ್ಟಿದ ಭೀಮಸೇನರಿಗೆ ಸಂಗೀತ ಎಳವೆಯಲ್ಲಿಯೇ ಅಂಟಿಕೊಂಡಿತು. ಆದರೆ ಸಂಗೀತವನ್ನು ಕಲಿಯಲು ಭೀಮಸೇನ ಜೋಶಿಯವರು ಪಟ್ಟಪಾಡು, ಪರಿಶ್ರಮ ಅಗಾಧವಾದದು. ಇಂದು ಅವರು ಪ್ರಸ್ತುತಪಡಿಸುವ ಪಾಂಡಿತ್ಯಪೂರ್ಣ, ಶ್ರೇಷ್ಠ ತರಗತಿಯ ಸಂಗೀತದ ಹಿಂದೆ ಅಪಾರವಾದ ಪರಿಶ್ರಮ, ತ್ಯಾಗ, ಕಷ್ಟಸಹಿಷ್ಣುತೆಯ ಚರಿತ್ರೆಯಿದೆ. 

	ಭೀಮಸೇನ ಜೋಶಿ  ಬಾಲ್ಯದಲ್ಲಿಯೇ ಸಂಗೀತದ ಬೆನ್ನುಹತ್ತಿದ್ದರು. ಎಲ್ಲಿಯಾದರೂ ಮನದುಂಬುವ ಸಂಗೀತ ಕೇಳಿದರೆ ಸಾಕು, ಅಲ್ಲಿಯೇ ನಿಂತುಬಿಡುವಂಥ ತಾದಾತ್ಮ್ಯತೆ. ಮಗನಿಗಿರುವ ಸಂಗೀತದ ಕುರಿತಾದ ಒಲವನ್ನು ಕಂಡು ಗುರುರಾಜಾಚಾರ್ಯರು ಅಗಸರ ಚೆನ್ನಪ್ಪವರನ್ನು, ನಂತರ ಬದಾಮಿಯ ಶಾಮಾಚಾರ್ಯರನ್ನು ಸಂಗೀತ ಕಲಿಸಲು ಗೊತ್ತು ಮಾಡಿದರು. ಆದರೆ, ನಿತ್ಯ ಶಾಲೆಗೆ ಹೋಗುವ ದಾರಿಯಲ್ಲಿದ್ದ ಭೂಸದ ಅವರ ಅಂಗಡಿಯಲ್ಲಿ ಅಬ್ದುಲ್ ಕರೀಂ ಖಾನರ ರೇಕಾರ್ಡು ಕೇಳಿದ್ದ ಭೀಮಸೇನರಿಗೆ ಆ ಎತ್ತರಕ್ಕೆ ಏರುವ ತವಕ. ಸವಾಯಿಗಂಧರ್ವರ ಹಾಡು ಕೇಳಿದ ಮೇಲಂತೂ ತಾನೂ ಅವರಂತೆ ಶ್ರೇಷ್ಠ ಗವಾಯಿಯಾಗುವ ಕನಸು. ಗದುಗಿನಲ್ಲಿದ್ದರೆ, ಉನ್ನತ ಶಿಕ್ಷಣ ಸಾಧ್ಯವಿಲ್ಲವೆಂದು ಭಾವಿಸಿ, ಸಂಗೀತದ ಗುರುವನ್ನು ಅರಸಿ ಮನೆ ಬಿಟ್ಟು ಓಡಿ ಹೋದರು. 

	ಮೊದಲು ಬಂದಿದ್ದು ವಿಜಾಪುರಕ್ಕೆ. ಅಲ್ಲಿ ಯಾರೋ ಗ್ವಾಲಿಯರಕ್ಕೆ ಹೋಗುವಂತೆ ಹೇಳಿದಾಗ ಮತ್ತೆ ಪ್ರಯಾಣ. ಈ ಬಾರಿ ಬಂದಿದ್ದು ಪುಣೆಗೆ.

	ಪುಣೆಯಲ್ಲಿ ಮಾಸ್ಟರ ಕೃಷ್ಣರಾವ ಪುಲಂಬ್ರಿಕರ ಅವರು ತಿಂಗಳಿಗೆ ನೂರು ರೂಪಾಯಿ ಫೀಸು ಕೇಳಿದರು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಭೀಮಸೇನನಿಗೆ ಇದು ಸಾಧ್ಯವಿಲ್ಲದ ಮಾತಾಗಿತ್ತು. ನಿರಾಸೆಯಾದರೂ ಹತಾಶೆಗೊಳ್ಳದೆ ದಿಲ್ಲಿಯ ಗಾಡಿ ಏರಿದರು. ಖಾಂಡವಾ ನಿಲ್ದಾಣದಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕಾಗಿ ಬಂಧನ. ಎರಡುದಿನಗಳ ನಂತರ ಬಿಡುಗಡೆಯಾಯಿತು. ಗ್ವಾಲಿಯರಕ್ಕೆ ಬಂದು, ಮಾಧವ ಸಂಗೀತ ವಿದ್ಯಾಲಯ ಸೇರಿಕೊಂಡರು. ಅಲ್ಲಿ ರಾಜಾಭಯ್ಯಾ ಪುಚ್ಛವಾಲೆ, ಕೃಷ್ಣರಾವ್ ಪಂಡಿತ, ಉಸ್ತಾದ ಹಾಫಿಜ ಅಲಿಖಾನರಂಥ ಪಂಡಿತರು  ಶಿಕ್ಷಕರಾಗಿದ್ದರು. ಕೆಲಕಾಲ ಅಲ್ಲಿ ಸಂಗೀತ ಪಾಠಗಳಿಗೆ ಹಾಜರಿ ಹಾಕಿದರು. ಉನ್ನತವಾದ ಸಂಗೀತವನ್ನು ಕಲಿಯ ಬಯಸಿದ್ದ ಭೀಮಸೇನರಿಗೆ ಈ ಪಾಠಗಳು ಪ್ರಾಥಮಿಕ ಎನಿಸತೊಡಗಿದವು. ಅಲ್ಲಿಂದ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಿ, ಅಲ್ಲಿನ ಭೀಷ್ಮದೇವ ಚಟರ್ಜಿಯವರಲ್ಲಿಗೆ ಸಾಗಿದರು. ಚಟರ್ಜಿಯವರು ಸಂಗೀತಕ್ಕಿಂತ ಸಿನಿಮಾಕ್ಕೆ ಹೆಚ್ಚು ಒತ್ತು ಕೊಡತೊಡಗಿದ್ದರಿಂದ ಅಲ್ಲಿಂದ ಹೊರಟು ದೆಹಲಿಗೆ ಬಂದದ್ದಾಯಿತು. ದೆಹಲಿಯಲ್ಲಿಯೂ ಸರಿಯಾದ ಗುರು ಸಿಗದಾದಾಗ ಜಲಂಧರಕ್ಕೆ ಪ್ರಯಾಣಿಸಿದರು. ಅಲ್ಲಿ ಪ್ರತಿವರ್ಷ ಹರಿವಲ್ಲಭ ಸಂಗೀತ ಸಮ್ಮೇಳನವನ್ನು ಏರ್ಪಡಿಸುತ್ತಾರೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ವಿನಾಯಕರಾವ ಪಟವರ್ಧನರನ್ನು ಭೀಮಸೇನ ಜೋಶಿಯವರು ಭೇಟಿಯಾದಾಗ ಅವರು ಕುಂದಗೋಳದಲ್ಲಿರುವ ಸವಾಯಿಗಂಧರ್ವರಲ್ಲಿ ಕಲಿಯುವಂತೆ ಸೂಚಿಸಿದರು. 

	ಸವಾಯಿ ಗಂಧರ್ವರು ಕಿರಾಣಾ ಘರಾಣೆಯ ಪ್ರವರ್ತಕರೆಂದು ಹೆಸರಾದ ಉಸ್ತಾದ ಅಬ್ದುಲ್ ಕರೀಂಖಾನ ಸಾಹೇಬರ ಶಿಷ್ಯರು. ಮರಾಠಿ ರಂಗಭೂಮಿಯಲ್ಲಿ ಸವಾಯಿ ಗಂಧರ್ವರು ಜನಪ್ರಿಯ ನಟ ಗಾಯಕ. ಕಾರಣಾಂತರಗಳಿಂದ ಇವರು ಕೆಲವು ಕಾಲ ಕುಂದಗೋಳದಲ್ಲಿ ನೆಲೆಸುವ ನಿರ್ಧಾರ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಭೀಮಸೇನ ಜೋಶಿ ಸವಾಯಿ ಗಂಧರ್ವರಲ್ಲಿ ಶಿಷ್ಯತ್ವ ಸ್ವೀಕರಿಸಿದರು. ಐದು ವರ್ಷ ಕಾಲಾವಧಿಯಲ್ಲಿ ಗುರುಗಳು ಕಲಿಸಿದ್ದು ಕೇವಲ ಮೂರು ರಾಗಗಳನ್ನು. ತೋಡಿ, ಮುಲ್ತಾನಿ, ಪೂರಿಯಾ. ಸವಾಯಿ ಗಂಧರ್ವರ ಗರಡಿಯಲ್ಲಿ ಪಳಗಿದ ಭೀಮಸೇನರು ಪ್ರಬುದ್ಧ ಗಾಯಕರೆನಿಸಿದರು.

	ಪಂ. ಭೀಮಸೇನ ಜೋಶಿಯವರು ಪರಿಶ್ರಮಯುಕ್ತವಾದ ಸಾಧನೆಯಿಂದ ಸಂಗೀತದ ಪಾಂಡಿತ್ಯವನ್ನು ಹೆಚ್ಚಿಸಿಕೊಂಡರು. ದಿನಂಪ್ರತಿ ಹದಿನಾರು ತಾಸು ರಿಯಾಜ್ ಮಾಡುತ್ತಿದ್ದರು. ಇದರಿಂದಾಗಿ, ಅವರ ಆತ್ಮ ವಿಶ್ವಾಸ ವರ್ಧಿಸಿತು. ಹಾಡುಗಾರಿಕೆಯಲ್ಲಿ ಸೌಂದರ್ಯ ಮೂಡತೊಡಗಿತು. 

ಇಂದು ಪಂ. ಭೀಮಸೇನ ಜೋಶಿ ಕಿರಾಣಾ ಘರಾಣೆಯ ಅಪ್ರತಿಮ ಗಾಯಕರೆಂದು ಪರಿಗಣಿಸಲ್ಪಟ್ಟಿದಾರೆ. ಸ್ವರ ಪ್ರಧಾನವಾಗಿ ಹಾಡುವುದು ಈ ಘರಾಣೆಯ ವಿಶಿಷ್ಟತೆ. ಆಲಾಪ ಪ್ರಧಾನವಾದ ಗಾಯನ ಶೈಲಿ ಇಲ್ಲಿದೆ. 

ಒಂದೊಂದೇ ಸ್ವರಗಳನ್ನು ಅನುಭವಿಸಿ ಮುಂದೆ ಸಾಗುವುದು ಹಾಗೂ ಆ ಸ್ವರಗಳಿಗೆ ಭಾವನೆಯನ್ನು ತುಂಬುವುದು ಕಿರಾಣಾ ಘರಾಣೆಯ ಪಾರಂಪರಿಕ ಹಾಡುಗಾರಿಕೆಯಲ್ಲಿ ಕಂಡು ಬರುವ ಸಂಗತಿ. ಪಂ. ಭೀಮಸೇನ ಜೋಶಿಯವರು ಕಿರಾಣಾ ಘರಾಣೆಯ ಈ ಹಾಡುಗಾರಿಕೆಯೊಂದಿಗೆ ಗಮಕ, ಬೋಲತಾನ್, ಲಯಕಾರಿ, ಮುರ್ಕಿ, ಮೀಂಡ್‍ಕಾರ್ಯ, ತಾನ್‍ಗಳ ಪ್ರಯೋಗಗಳನ್ನು ಹಿತಮಿತವಾಗಿ ಅಳವಡಿಸಿಕೊಳ್ಳುತ್ತಾರೆ. ವಿರಳವಾಗಿ ಸರಗಮಗಳನ್ನು ಸೇರಿಸುತ್ತಾರೆ. ಗ್ವಾಲಿಯರ ಘರಾಣಿಯ ಲಯ ಪ್ರಾಧಾನ್ಯತೆ, ಆಗ್ರಾ ಘರಾಣಿಯ ಬೋಲ್ ತಾನಗಳು, ಪತಿಯಾಲಾ ಘರಾಣಿಯ ಸಪಾಟ ತಾನಗಳು, ಜೈಪುರ ಘರಾಣಿಯ ಸಂಕೀರ್ಣ ತಾನಗಳನ್ನು ಕೂಡ ಹಾಡುಗಾರಿಕೆಯ ಸೌಂದರ್ಯಕ್ಕಾಗಿ ಬಳಸಿಕೊಳ್ಳುವುದು ಪಂ. ಭೀಮಸೇನ ಜೋಶಿಯವರಲ್ಲಿರುವ ವೈವಿಧ್ಯತೆಗೆ ನಿದರ್ಶನ. ಪ್ರತಿಯೊಂದು ಬಾರಿ ಸಮ್ (ತಾಲದ ಆವರ್ತನ) ಗೆ ಬರುವಾಗ ವೈವಿಧ್ಯತೆಯನ್ನು ಪ್ರದರ್ಶಿಸುತ್ತಾರೆ. ಲವಲವಿಕೆ, ಭಾವಪೂರ್ಣ ಪ್ರಸ್ತುತಿ ಅವರ ಹಾಡುಗಾರಿಕೆಯಲ್ಲಿ ಜೀವ ಕಳೆಯನ್ನು ತುಂಬುತ್ತವೆ. ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಸ್ವರಗಳು. ತಾನಗಳು, ಫಿರಕಿ, ಮುರ್ಕಿ ಇತ್ಯಾದಿ ಶಾಸ್ತ್ರೀಯ ಸಂಗೀತದ ಅಂಗಗಳೂ ಆಕರ್ಷಕವಾಗಿಯೇ ಇರುತ್ತವೆ. 
ಜನಪ್ರಿಯತೆ, ಪ್ರಖ್ಯಾತಿ, ಭೀಮಸೇನ ಜೋಶಿಯವರಿಗೆ ಅವರ ಸಂಗೀತ ಗಳಿಸಿಕೊಟ್ಟ ಆಸ್ತಿ. ಅವರಷ್ಟು ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಗಾಯಕರಿಲ್ಲ. ಅವರು ನೀಡುವ ಕಾರ್ಯಕ್ರಮಗಳಲ್ಲೂ ವೈವಿಧ್ಯತೆಯಿದೆ. ಖಯಾಲ್ ಹಾಡುಗಾರಿಕೆ, ಮರಾಠಿ ಅಂಭಂಗಗಳ ಸಂತವಾಣಿ, ಕನ್ನಡ ಕೀರ್ತನೆಗಳ ದಾಸವಾಣಿ, ಕಬೀರ, ಮೀರಾ, ಸೂರದಾಸ, ಬ್ರಹ್ಮಾನಂದರ ಭಜನೆ ಗಳು, ನಾಟ್ಯಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾರೆ. ಬೇಂದ್ರೆ, ಕುವೆಂಪು, ಆನಂದಕಂದರ ಭಾವಗೀತೆಗಳನ್ನು ಅವರು ಸಂದರ್ಭೋಚಿತವಾಗಿ ಹಾಡಿದ್ದಾರೆ. ಹಾಗೆಯೇ ಭಾಗ್ಯಶ್ರೀ, ಕನ್ನಡ ನಾಟಕದಲ್ಲಿ, ಕೆಲವಾರು ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಭಾಗ್ಯದ ಲಕ್ಷ್ಮೀ ಬಾರಮ್ಮಾ ಜನಪ್ರಿಯ ಸಿನಿಮಾ ಹಾಡೂ ಹೌದು, ದಾಸವಾಣಿಯ ಟ್ರಂಪ್‍ಕಾರ್ಡ್ ಕೂಡ ಹೌದು ಮತ್ತು ಕನ್ನಡ ನೆಲದಾಚೆಯ ಸಂಗೀತ ರಸಿಕರು ಕೇಳಿ ಹಾಡಿಸುವ ಬೇಡಿಕೆಯ ಗೀತೆಯೂ ಹೌದು. ಈ ಹಾಡು ಸಂದರ್ಭಕ್ಕೆ ತಕ್ಕಂತೆ ಮೂರು ನಿಮಿಷಗಳಿಂದ ಮೂವತ್ತು ಅಥವಾ ಅದಕ್ಕೂ ಹೆಚ್ಚು ಕಾಲಾವಧಿಯಲ್ಲಿ ಹಾಡಲ್ಪಡುತ್ತದೆ. 

ಪಂಡಿತ ಭೀಮಸೇನ ಜೋಶಿಯವರ ಈ ಸಾಧನೆಯ ಹಿಂದೆ ಪತ್ನಿ ದಿ. ವತ್ಸಲಾತಾಯಿಯವರ ಆಸರೆಯ ಪ್ರೇರಣೆಯಿದೆ. 1943ರಲ್ಲಿ ಅವರು ಭಾಗ್ಯಶ್ರೀ ನಾಟಕದಲ್ಲಿ ಅಭಿನಯಿಸಿದಾಗಿನಿಂದ ವತ್ಸಲಾರ ಜೊತೆ ನಂಟು ಬೆಳೆಯ ತೊಡಗಿತು. ಈ ನಂಟು ಮುಂದೆ 1949 ರಲ್ಲಿ ಇದೇ ನಾಟಕವನ್ನು ಮುಂಬೈನಲ್ಲಿ ಪ್ರದರ್ಶಿಸಿದಾಗ ಇನ್ನೂ ಗಾಢವಾಗಿತ್ತು. 1951 ರಲ್ಲಿ ಭೀಮಸೇನರು ವತ್ಸಲಾರನ್ನು ಮದುವೆಯಾದರು. ವತ್ಸಲಾತಾಯಿಯವರು ಸಹ ಸಂಗೀತ ಕಲಾವಿದೆ ಹಾಗೂ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳ ನಿರೂಪಕಿಯಾಗಿದ್ದರು. 

ವತ್ಸಲಾರೊಂದಿಗೆ ವಿವಾಹವಾಗುವ ಪೂರ್ವದಲ್ಲಿಯೇ ಭೀಮಸೇನರಿಗೆ 1944 ರಲ್ಲಿ ಸುನಂದಾ ಹುನಗುಂದರೊಂದಿಗೆ ವಿವಾಹವಾಗಿತ್ತು. ಭೀಮಸೇನರ ಎರಡನೆಯ ಮದುವೆ, ಮೊದಲನೆಯ ಹೆಂಡತಿಯೊಂದಿಗೆ ವಿಚ್ಛೇದನ ಅಥವಾ ಅಗಲಿಕೆಯ ಪರಿವರ್ತನೆಯಲ್ಲಿ ಕೊನೆಗೊಳ್ಳಲಿಲ್ಲವೆಂಬುದು ಗಮನಾರ್ಹ. ಭೀಮಸೇನರಿಗೆ ಶ್ರೀಮತಿ ಸುನಂದಾರಿಂದ (ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು) ಹಾಗೂ ವತ್ಸಲಾರಿಂದ ಮೂವರು ಮಕ್ಕಳು. (ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ) ಭೀಮಸೇನರ ಈ ಎರಡೂ ಕುಟುಂಬಗಳು ಪುಣೆಯಲ್ಲಿ ನೆಲೆಸಿವೆ. 

ಸುನಂದಾ ಹಾಗೂ ವತ್ಸಲಾ ಇಬ್ಬರೂ ಭೀಮಸೇನರ ಸಾಧನೆಗೆ ಸ್ಫೂರ್ತಿಯಾಗಿರುವರು. 
1964ರಷ್ಟೊತ್ತಿಗೆ ಭೀಮಸೇನ ಜೋಶಿಯವರಿಗೆ ಭಾರತದ ತುಂಬ ಕಚೇರಿಗೆ ಕರೆ ಬರತೊಡಗಿದ್ದವು. ಆ ಕಾಲಕ್ಕೆ ಅವರು ಅತ್ಯಂತ ಬೇಡಿಕೆಯ ಗಾಯಕರಾಗಿದ್ದರು. ಈ ವೇಳೆಗಾಗಲೇ ಹೆಚ್.ಎಂ.ವಿ. ಕಂಪನಿಯಿಂದ ಅನೇಕ ಧ್ವನಿಮುದ್ರಿಕೆಗಳು ಬಿಡುಗಡೆಯಾಗಿ ರಾಷ್ಟ್ರಾದ್ಯಾಂತ ಭೀಮಸೇನರನ್ನು ಪರಿಚಯಿಸಿದ್ದವು. ಇದರರಿಂದಾಗಿ ಎಲ್ಲೆಡೆಯಿಂದ ಕರೆಗಳ ಸುರಿಮಳೆ ಆರಂಭವಾಗಿತ್ತು. ಹೋದಲ್ಲೆಲ್ಲ ಅವರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಜನರ ಮನವನ್ನು ತಣಿಸಿದರು. ನಿಧಾನವಾಗಿ ಅವರ ಕೀರ್ತಿ ವಿದೇಶಗಳಲ್ಲೂ ವ್ಯಾಪಿಸಿತು. 1964ರಿಂದ ಈ ವರೆಗೆ ಅವರು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಅಲ್ಲಿಯೂ ಅವರು ಜನಪ್ರಿಯತೆಯನ್ನು ಗಳಿಸಿಕೊಂಡು ಬಂದಿರುವುದು ಹೆಚ್ಚುಗಾರಿಕೆ. ನ್ಯೂಯಾರ್ಕ್ ನಗರದಲ್ಲಿ ಗೋಡೆಗಳಿಗೆ ಪೋಸ್ಟರ್‍ಗಳನ್ನು ಅಂಟಿಸುವ ಮೂಲಕ, ಅವರ ಕಾರ್ಯಕ್ರಮವನ್ನು ಪ್ರಚಾರಗೊಳಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಎರಡು ಸಾವಿರ ಶೋತೃಗಳು ನೆರೆದಿದ್ದರು. ಕಾಬೂಲಿನ ದೊರೆ ಝಹೀರಶಾಹ ತನ್ನ ಮಗಳ ಒತ್ತಾಯದ ಮೇರೆಗೆ 1964 ರಲ್ಲಿ ಭಿಮಸೇನರನ್ನು ಆಫ್‍ಘಾನಿಸ್ತಾನಕ್ಕೆ ಆಹ್ವಾನಿಸಿದ್ದ. ತದನಂತರ ಅವರು ಕೆನಡಾ, ಇಂಗ್ಲೆಂಡ್, ಅಮೆರಿಕಾ, ಇಟಲಿ, ಜಪಾನ್ ದೇಶಗಳಲ್ಲಿ ಕಾರ್ಯಕ್ರಮಗಳನ್ನು  ನೀಡಿದ್ದಾರೆ. 

ಕೇಳುಗರನ್ನು ಹಿಡಿದಿಡುವ ಗುಣ ಅವರ ಹಾಡುಗಾರಿಕೆಯಲ್ಲಿ ಇರುವುದರಿಂದ ಅವರು ಜನಪ್ರಿಯರಾಗಿದ್ದಾರೆ. ಸ್ವರಶುದ್ಧತೆ, ಮಾರ್ದವತೆ, ವಿಪುಲವಾಗಿ ಬಳಸುವ ಫಿರತ್‍ಗಳು, ಅದ್ಭುತವಾದ ಉಸಿರುನಿಯಂತ್ರಣಗಳಿಂದಾಗಿ ಅವರ ಹಾಡುಗಾರಿಕೆ ಕೇಳುಗರನ್ನು ತಟ್ಟನೆ ಆಕರ್ಷಿಸಿ ಬಿಡುತ್ತದೆ. 

ಪಂ. ಭೀಮಸೇನ ಜೋಶಿಯವರು ಅನೇಕ ಪ್ರಶಸ್ತಿಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕೊಲ್ಲಾಪುರ, ಗುಲಬರ್ಗಾ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪ್ರಖ್ಯಾತ ತಾನಸೇನ ಹಾಗೂ ಕಾಳಿದಾಸ ಸಮ್ಮಾನ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಕರ್ನಾಟಕ ಸರಕಾರ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು (2004) ನೀಡಿ ಗೌರವಿಸಿದೆ. 
ಕೆನಡಾದ ವಾಣಿಜ್ಯೋದ್ಯಮಿ ಜೇಮ್ಸ್ ಬೆವರಿಜ್  ಮಿಯಾ ಮಲ್ಹಾರ ಎಂಬ ಹೆಸರಿನಲ್ಲಿ ಭೀಮಸೇನರ ಕುರಿತು 20 ನಿಮಿಷಗಳ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾನೆ. ಇದಕ್ಕೂ ಮೊದಲು ಎಂ ಲೂಯಿಸ್ ಎಂಬ ಡಚ್ ನಿರ್ಮಾಪಕ ತಾನು ತಯಾರಿಸಿದ ಭೀಮಸೇನರ ಕುರಿತಾದ ಸಿನಿಮಾವನ್ನು ಪಾಶ್ಚಿಮಾತ್ಯ ದೇಶಗಳಲ್ಲೆಲ್ಲ ಪ್ರದರ್ಶಿಸಿದ್ದಾನೆ. 

ಇಂದು ಪಂ. ಭೀಮಸೇನ ಜೋಶಿಯವರು ಕಿರಾಣಾ ಘರಾಣೆಯ ಆಧಾರ ಸ್ತಂಭಗಳಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ ಸಂಗೀತ ಪರಂಪರೆಯನ್ನು ಮುಂದುವರಿಸಲು ಅವರು ಹೆಸರಾಂತ ಶಿಷ್ಯರನ್ನು ಸಹ ತಯಾರು ಮಾಡಿದ್ದಾರೆ. ಅವರಲ್ಲಿ ಮಾಧವಗುಡಿ, ಶ್ರೀಕಾಂತ ದೇಶಪಾಂಡೆ, ಅರವಿಂದ ಹುಯಿಲಗೋಳ, ರಾಮಕೃಷ್ಣ ಪಟವರ್ಧನ, ಅನಂತ ತೇರದಾಳ ಹಾಗೂ ಶ್ರೀಪತಿ ಪಾಡಿಗಾರರು ಪ್ರಮುಖರು. ಭೀಮಸೇನ ಜೋಶಿಯವರ ಮಗ ಶ್ರೀನಿವಾಸ ಜೋಶಿ ಸಹ ತಂದೆಯವರ ಬಳಿ ಸಂಗೀತ ಕಲಿಯುತ್ತಿದ್ದಾನೆ.

ಈವರೆಗೆ ಬಿಡುಗಡೆಯಾಗಿರುವ ಅವರ ನೂರಾರು ಧ್ವನಿಸುರಳಿಗಳು ಸಿ.ಡಿ. ಗಳು ಅವರ ಹಾಡುಗಾರಿಕೆಯನ್ನು ಮುಂದಿನ ತಲೆಮಾರಿನವರಿಗೆ ಸಾಗಿಸುವ ಕೆಲಸ ಮಾಡುತ್ತವೆ. ತನ್ಮೂಲಕ ಪಂ. ಭೀಮಸೇನ ಜೋಶಿಯವರು ಕಿರಾಣಾ ಘರಾಣೆಗೆ ನೀಡಿರುವ ಹೊಸ ಆಯಾಮ ಕೂಡ ಗಾನರೂಪದಲ್ಲಿ ದಾಖಲಾಗಿ ಉಳಿಯುತ್ತದೆ. ಕಿರಾಣಾ ಘರಾಣೆ ಹಾಗೂ ಹಿಂದೂಸ್ತಾನಿ ಸಂಗೀತದ ಇತಿಹಾದಲ್ಲಿ ಪಂ. ಭೀಮಸೇನ ಜೋಶಿಯವರ ಹೆಸರು ಸದಾ ಸ್ಮರಣೀಯ. 		
	(ಶೀರಿಷ್ ಜೋಶಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ